+91-8482-245241 regkvafsu@gmail.com

ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು

ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇದರ ಉದ್ಘಾಟನೆಯು ಅಂದಿನ ಮುಖ್ಯಮಂತ್ರಿಗಳಾದ ಶ್ರೀ. ಬಿ. ಡಿ. ಜತ್ತಿಯವರಿಂದ 1958ರ ಜುಲೈ 25ರಂದು ನೆರವೇರಿತು. ಮೈಸೂರು ಸೀರಮ್ ಇನ್ಸ್‍ಸ್ಟಿಟ್ಯೂಟ್ ಎಂದು ಕರೆಯಲಾಗುತ್ತಿದ್ದ ಇಂದಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಬೋಧನಾ ಕಾರ್ಯಗಳು ಅಂದು ಆರಂಭವಾದವು. ಈಗಿರುವ ಕಟ್ಟಡವು 1962ರ ಜನವರಿ 6ರಂದು ಮೈಸೂರಿನ ಮಾಜಿ ಮಹಾರಾಜರು ಹಾಗೂ ಮೊತ್ತಮೊದಲ ರಾಜ್ಯಪಾಲರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್‍ರವರಿಂದ ಉದ್ಘಾಟನೆಗೊಂಡಿತು. ಮಹಾವಿದ್ಯಾಲಯದ ಮೂಲ ಹೆಸರು ‘ಮೈಸೂರು ಪಶುವೈದ್ಯಕೀಯ ಮಹಾವಿದ್ಯಾಲಯ’.

ಆರಂಭದಲ್ಲಿ ಈ ಮಹಾವಿದ್ಯಾಲಯವು ಮೈಸೂರು ವಿಶ್ವವಿದ್ಯಾಲಯದಡಿ ಕಾರ್ಯ ನಿರ್ವಹಿಸಿತು. ಅಕ್ಟೋಬರ್ 1, 1965ರಿಂದ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇದರ ಅಂಗಸಂಸ್ಥೆಯಾಯಿತು. ಏಪ್ರಿಲ್ 1, 2005ರಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನ ಸಂಸ್ಥೆಯಾಯಿತು. ಐವತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗೆ ‘ಸುವರ್ಣ ಮಹೋತ್ಸವ ವರ್ಷ’ ವನ್ನು 2007-08ರಲ್ಲಿ ಆಚರಿಸಲಾಯಿತು.

ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಮುಖ ಉದ್ದೇಶ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ. ಇದುವರೆಗೂ ಸುಮಾರು 4000 ಪಶುವೈದ್ಯ ಪದವೀಧರರನ್ನು ಮತ್ತು 1200 ಸ್ನಾತಕೋತ್ತರ ಪದವೀಧರರನ್ನು ರೂಪಿಸಲಾಗಿದೆ. ಇಲ್ಲಿ ಶಿಕ್ಷಣ ಪಡೆದ ಪಶುವೈದ್ಯರು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶ-ವಿದೇಶದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆದು ರಾಷ್ಟ್ರದ ಪ್ರಖ್ಯಾತ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ, ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ಭಾರತೀಯ ಆಹಾರ ಪೋಷಣೆ ಮತ್ತು ಶರೀರಕ್ರಿಯಾ ವಿಜ್ಞಾನ ಸಂಸ್ಥೆಯಲ್ಲಿ ಹಾಗೂ ಹಲವು ಪದವೀಧರರು ಭಾರತೀಯ ಆಡಳಿತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಮೆರಿಕಾ, ಕೆನಡಾ, ಮಲೇಶಿಯಾ, ಇರಾನ್, ಇರಾಕ್, ಘಾನಾ, ಮಾರಿಶಿಯಸ್, ನೈಜೀರಿಯಾ, ಸೊಮಾಲಿಯಾ, ಉಗಾಂಡ, ನೇಪಾಳ, ಶ್ರೀಲಂಕಾ, ಆಫ್ಘಾನಿಸ್ತಾನ ಮತ್ತು ಬಹೆರೇನ್ ದೇಶದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ.

ಇಲ್ಲಿರುವ 19 ವಿಭಾಗಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿವೆ. ಹೆಬ್ಬಾಳ ಮತ್ತು ಯಲಹಂಕ ಪಶು ಆಸ್ಪತ್ರೆಗಳು ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ, ರೈತರಿಗೆ ಉಪಯುಕ್ತ ಸಲಹೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡುತ್ತಿವೆ. ಹೈನುಗಾರಿಕೆ, ಕುರಿ, ಹಂದಿ ಮತ್ತು ಕೋಳಿ ಸಾಕಾಣಿಕೆ ಹಾಗೂ ಪ್ರಯೋಗಾತ್ಮಕ ಸಣ್ಣ ಪ್ರಾಣಿಗಳ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚಟುವಟಿಕೆಗಳು ನಡೆಯುತ್ತಿವೆ. ಕುಕ್ಕುಟ ವಿಭಾಗವು ಅಭಿವೃದ್ಧಿಪಡಿಸಿರುವ ಗಿರಿರಾಜ ಮತ್ತು ಸ್ವರ್ಣಧಾರಾ ಕೋಳಿ ತಳಿಗಳನ್ನು ಹಿತ್ತಲ ಕೋಳಿಗಳನ್ನಾಗಿ ಗ್ರಾಮೀಣ ಮತ್ತು ಬುಡಕಟ್ಟು ಜನರ ಪ್ರದೇಶಗಳಲ್ಲಿ ಸಾಕಲಾಗುತ್ತಿದೆ. ಏಷ್ಯಾ ರಾಷ್ಟ್ರಗಳಲ್ಲಿಯೂ ಪ್ರಸಿದ್ಧಿ ಪಡೆದಿವೆ.

ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯವು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ ಮೂಲಕ ದೇಶ ವಿದೇಶದ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅಂತಹ ಒಡಂಬಡಿಕೆಗಳು ಮಿನ್ನೆಸೋಟಾ ವಿಶ್ವವಿದ್ಯಾಲಯ, ಅಮೆರಿಕಾ (2006), ಪಡ್ರ್ಯೂ ವಿಶ್ವವಿದ್ಯಾಲಯ, ಅಮೆರಿಕಾ (2007), ರಾಷ್ಟ್ರೀಯ ಮಾಂಸ ಸಂಶೋಧನಾ ಕೇಂದ್ರ, ಹೈದರಾಬಾದ್ (2011), ಆಲ್‍ಟೆಕ್ ಆಹಾರ ಪೋಷಣೆ ಸಂಶೋಧನಾ ಒಕ್ಕೂಟ (2012), ಪ್ರಾಣಿ ಆಹಾರ ಪೋಷಣೆ, ಇಂಡಿಯಾ ಪ್ರೈ. ಲಿಮಿಟೆಟ್, ಬೆಂಗಳೂರು (2012), ಪ್ರಜಾ ಸಮುದಾಯ, ಪಶುವೈದ್ಯಕೀಯ ಸಂಘ (2012), ವಾಲ್ತಾಮ್‍ಡೆಸ್ಕ್ ಮಾರ್ಸ್-ಇಂಡಿಯಾ ಇಂಟರ್ ನ್ಯಾಷನಲ್, ನವದೆಹಲಿ (2012) ಮತ್ತು ಗ್ರಾಮೀಣ ಪರಿವರ್ತನಾ ಪ್ರತಿಷ್ಠಾನ, ಹೈದರಾಬಾದ್ (2012).

ಇತರೆ ಚಟುವಟಿಕೆಗಳು

  • ಮೇವು ತಳಿಗಳ ಸಂಗ್ರಹಾಲಯ ಮತ್ತು ಪ್ರಾತ್ಯಕ್ಷಿಕೆ : ಸುಮಾರು 30 ಜಾತಿಯ ಮೇವಿನ ಗಿಡಗಳು ಮತ್ತು ಮರಗಳು ಸಂಗ್ರಹಾಲಯದಲ್ಲಿವೆ. ರಾಜ್ಯದ ಮತ್ತು ಹೊರರಾಜ್ಯದ ಸಾವಿರಾರು ರೈತರು ಭೇಟಿ ನೀಡಿ ಸೂಕ್ತ ಮಾಹಿತಿ ಪಡೆಯುತ್ತಿದ್ದಾರೆ.
  • ಸಿವಿಏ- ಕ್ರೂಸಲ್-ಕಪಪಮೀವಿವಿ ರೋಗ ನಿರ್ಧಾರ ಪ್ರಯೋಗ ಶಾಲೆ: 28.01.2013ರಂದು ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರಿನಲ್ಲಿ ರೇಬೀಸ್ ರೋಗ ನಿರ್ಧಾರ ಪ್ರಯೋಗ ಶಾಲೆ ಉದ್ಛಾಟನೆಗೊಂಡಿತು. ಈ ಪ್ರಯೋಗಶಾಲೆ ದೇಶದಲ್ಲೇ ಮತ್ತು ಏಶಿಯಾ ಉಪಖಂಡದಲ್ಲೇ ವಿನೂತನವಾದದ್ದು.
  • ಐಸಿಎಆರ್ ಎನ್.ಎ.ಇ. ಯೋಜನೆಯ ಪ್ರಾಣಿ ರೋಗಗಳ ದಾಖಲಾತಿ ಮತ್ತು ಅಂಗಾಂಶ ಬ್ಯಾಂಕ್: ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಯಾಗಿದ್ದು ಅದರ ಸಂಶೋಧನೆಗಳು ಪ್ರಾಣಿ ರೋಗಗಳ ದಾಖಲಾತಿ ಮತ್ತು ಅಂಗಾಂಶ ಬ್ಯಾಂಕ್ ಕುರಿತಾಗಿದೆ.
  • ಪಶುಬಂಧ: 2012ರಲ್ಲಿ ಪ್ರಾರಂಭವಾದ ‘ಪಶುಬಂಧ’ ಎಂಬ ಇ-ಪ್ರಕಟಣೆಯು ಪಶುವೈದ್ಯರಿಗೆ ತಾಂತ್ರಿಕ ಮಾಹಿತಿ ಒದಗಿಸುತ್ತಿದೆ.
  • ಧನ್ವಂತರಿ ಆಂಬುಲೆನ್ಸ್ ಸೇವೆ : ರೋಗಗ್ರಸ್ಥ ಪ್ರಾಣಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಮಹಾವಿದ್ಯಾಲಯದ ಆಸ್ಪತ್ರೆಗೆ ಕರೆತರಲು ಸುಸಜ್ಜಿತವಾದ ‘ಧನ್ವಂತರಿ’ ಆಂಬುಲೆನ್ಸ್ ಸೌಕರ್ಯವನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಪ್ರಾರಂಭಿಸಲಾಗಿದೆ.