+91-8482-245241 regkvafsu@gmail.com

ಸೌಕರ್ಯಗಳು

ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ

ಗ್ರಂಥಾಲಯವು ಕೃಷಿ ಕಾಲೇಜು ಪ್ರಾರಂಭವಾದ 1956 ಹಾಗೂ ಪಶುವೈದ್ಯಕೀಯ ಕಾಲೇಜು ಪ್ರಾರಂಭವಾದ 1958 ರಿಂದ ಕಾರ್ಯನಿರ್ವಹಿಸುತ್ತಿದೆ. ಗ್ರಂಥಾಲಯವು ಆರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿತ್ತು. ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ, ಕೃಷಿ ಮಾರುಕಟ್ಟೆ, ಕೃಷಿ ಇಂಜಿನಿಯರಿಂಗ್, ಹೈನುಗಾರಿಕೆ ಮುಂತಾದ ವಿಷಯಗಳ ಗ್ರಂಥಗಳ ಸಂಗ್ರಹವಿತ್ತು. ತ್ರೈಮಾಸಿಕ ಶಿಕ್ಷಣದ ಪದ್ದತಿಯೊಂದಿಗೆ 1965ರಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿತು. 2005 ರಿಂದ ಕರ್ನಾಟಕ ಪಶುವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಭಾಗವಾಗಿದೆ.

ಪ್ರಾದೇಶಿಕ ಕ್ಯಾಂಪಸ್ ಗ್ರಂಥಾಲಯವು ವಿಶ್ವವಿದ್ಯಾಲಯದ ಶೈಕ್ಷಣಿಕ, ಸಂಶೋಧನೆ ಮತ್ತು ವಿಸ್ತರಣಾ ಧ್ಯೇಯವನ್ನು ಬಲಪಡಿಸುವಲ್ಲಿ ಹಾಗೂ ಜ್ಞಾನದ ಪ್ರಸರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಗ್ರಂಥಾಲಯವು ನೀಡುತ್ತಿರುವ ಸೇವೆಗಳು ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿವೆ. ಪುಸ್ತಕಗಳು, ನಿಯತಕಾಲಿಕಗಳು, ಪ್ರಬಂಧಗಳು, ವರದಿಗಳು ಮತ್ತು ಕರಪತ್ರಗಳು ಅತ್ಯುತ್ತಮ ಗುಣಮಟ್ಟದ್ದಾಗಿವೆ. ಹಲವು ವಿಜ್ಞಾನ ವಿಷಯಗಳ ಇ-ಪುಸ್ತಕಗಳು, ಇ-ಜರ್ನಲ್‍ಗಳು ಮತ್ತು ಇನ್ನಿತರ ಮಾಹಿತಿಗಳನ್ನು ನೀಡುವ ವ್ಯವಸ್ಥೆಯಿದೆ.

ಜೊತೆಗೆ ಅಂತರ್ಜಾಲ ವ್ಯವಸ್ಥೆ ಮತ್ತು ಭಾಷಾ ವಿಭಾಗಗಳಿಗೆ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಗ್ರಂಥಾಲಯದ ಸಂಗ್ರಹದಲ್ಲಿ 25,379 ಪುಸ್ತಕಗಳಿವೆ. ವರದಿಗಳು ಮತ್ತು ಪ್ರಬಂಧಗಳನ್ನು ಹೊರತುಪಡಿಸಿ ವಿವಿಧ ವಿಷಯಗಳಿಗೆ ಸಂಬಂಧಿಸಿದ 12,572 ಹಿಂದಿನ ಸಂಪುಟಗಳಿವೆ. ಸುಮಾರು 2,200 ಸಂಶೋಧನೆ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಹಾಪ್ರಬಂಧಗಳ ಸಂಗ್ರಹವಿದೆ. ಇ-ರೂಪದಲ್ಲಿ 3500 ಕ್ಕೂ ಹೆಚ್ಚು ಜರ್ನಲ್‍ಗಳ ಸಂಶೋಧನಾ ಲೇಖನಗಳನ್ನು ಪಡೆಯುವ ಅವಕಾಶವಿದೆ. ಪುಸ್ತಕ, ಪತ್ರಿಕೆ, ಮಹಾಪ್ರಂಬಂಧ ಮತ್ತು ಪರಾಮರ್ಶನ ಸಂಪನ್ಮೂಲಗಳ ಡೇಟಾಬೇಸ್ ಸಿದ್ದಪಡಿಸಿದ್ದು ಅದು ಓ.ಪಿ.ಎ.ಸಿ ಮೂಲಕ ಲಭಿಸುವ ವ್ಯವಸ್ಥೆ ಮಾಡಿದೆ. ಇತ್ತಿಚೆಗೆ ಗ್ರಂಥಾಲಯವು ಇ-ಲಿಬ್‍ನಿಂದ ಕೋಹಾಗೆ ಬದಲಾವಣೆಗೊಂಡಿದೆ. ಇಂತಹ ಬಳಕೆಯು ಹೆಚ್ಚು ಅನುಕೂಲಕರ.

ಪಶುವೈದ್ಯಕೀಯ ಮಹಾವಿದ್ಯಾಲಯ ಮತ್ತು ಹೈನು ಮಹಾವಿದ್ಯಾಲಯದ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ನಿತ್ಯ 12 ಗಂಟೆಗಳ ಕಾಲ ತೆರೆದಿರುತ್ತದೆ. ಶನಿವಾರ ಮತ್ತು ಭಾನುವಾರಗಳಂದು ಸೀಮಿತ ಅವಧಿಗೆ ತೆರೆದಿರುತ್ತದೆ. ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಕ್ಕೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸದಸ್ಯರಾಗಬಹುದು. ಸಂಸ್ಥೆಗಳಿಂದ ಪರಿಚಯ ಪತ್ರ ತರುವ ಗುರುತಿನ ಚೀಟಿ ಒದಗಿಸಿದ ಹೊರಗಿನ ಅಧಿಕೃತ ವ್ಯಕ್ತಿಗಳಿಗೆ ಕೆಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಕಾಮಧೇನು ವಿದ್ಯಾರ್ಥಿನಿಲಯ (ಬಾಲಕರ ವಿದ್ಯಾರ್ಥಿನಿಲಯ)

ಡಾ. ಎ. ಸಹದೇವ್ ಅವರು ಮುಖ್ಯ ಕ್ಷೇಮಪಾಲಕರಾಗಿ ಮತ್ತು ಡಾ. ಎಸ್. ನವೀನ್ ಕುಮಾರ್ ಅವರು ಕ್ಷೇಮಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಸ್ಟೆಲ್ ನಿರ್ವಹಣಾ ಸಮಿತಿ ಮತ್ತು ಹಾಸ್ಟೆಲ್ ಮೇಲ್ವಿಚಾರಣಾ ಸಮಿತಿಯು ಹಾಸ್ಟೆಲ್ ಆಡಳಿತದ ಕಾಲಕಾಲದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಉತ್ತಮ ಆಡಳಿತಕ್ಕಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಒದಗಿಸಲಾದ ‘ಹಾಸ್ಟೆಲ್ ನಿಯಮಗಳು’ ಎಂಬ ಕೈಪಿಡಿಯಿದೆ.

ವಿದ್ಯಾರ್ಥಿನಿಲಯವು ಎರಡು ಬ್ಲಾಕ್‍ಗಳನ್ನು ಹೊಂದಿದೆ. 120 ಕೊಠಡಿಗಳು, 3 ಸುಸಜ್ಜಿತ ಅತಿಥಿ ಕೊಠಡಿಗಳು, ವಾಚನಾಲಯ, ಕಂಪ್ಯೂಟರ್ ಕೊಠಡಿ ಮತ್ತು ಟಿವಿ ಕೊಠಡಿಯ ವ್ಯವಸ್ಥೆಯಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಎಂಬ ಎರಡು ಪ್ರತ್ಯೇಕ ಭೋಜನಾಲಯಗಳಿವೆ. ಪ್ರಿಫೆಕ್ಟರ್‍ಗಳು ಭೋಜನಾಲಯಗಳನ್ನು ಕ್ಷೇಮಪಾಲಕರ ಉಸ್ತುವಾರಿಯಲ್ಲಿ ನಡೆಸುತ್ತಾರೆ. ಭೋಜನಾಲಯದ ಖರ್ಚು ಡಿವಿಡೆಂಟ್ ರೂಪದ್ದಾಗಿದೆ. 24 ಗಂಟೆ ನೀರು ಸರಬರಾಜು ಮಾಡಲು ಪ್ರತ್ಯೇಕ ಬೋರ್‍ವೆಲ್, ಬಿಸಿನೀರನ್ನು ಒದಗಿಸಲು ಸೌರತಾಪಮಾನ ಸೌಲಭ್ಯ, ನಿರಂತರ ವಿದ್ಯುತ್ ವ್ಯವಸ್ಥೆಗೆ 30 ಕೆವಿ ಜನರೇಟರ್ ವ್ಯವಸ್ಥೆಗಳಿವೆ. ಟೇಬಲ್ ಟೆನ್ನಿಸ್ ಹಾಲ್ ಮತ್ತು ಜಿಮ್ನಾಷಿಯಂ ಸೌಲಭ್ಯಗಳಿವೆ. ಸಿಸಿಟಿವಿ ಕಣ್ಗಾವಲಿದೆ. ಅನಿಯಮಿತ ವೈ-ಫೈ, ಇಂಟರ್ನೆಟ್, ಕಂಪ್ಯೂಟರ್, ಮುದ್ರಣ, ಜೆರಾಕ್ಸ್ ಮತ್ತು ದಾಖಲೆಗಳ ಸ್ಕ್ಯಾನಿಂಗ್ ಸೌಲಭ್ಯಗಳಿವೆ.

ಸ್ನಾತಕೋತ್ತರ ವಿದ್ಯಾರ್ಥಿನಿಲಯ

ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅನುದಾನದ ಅಡಿಯಲ್ಲಿ 2019 ರಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿನಿಲಯವನ್ನು ನಿರ್ಮಿಸಲಾಗಿದೆ. 12 ಕೊಠಡಿಗಳಲ್ಲಿ 24 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಹಾಸ್ಟೆಲ್

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ, ಉದಾಹರಣೆಗೆ, ಎನ್‍ಆರ್‍ಐ ಕೋಟಾ (ವಿದೇಶಿ ಪ್ರಜೆಗಳು/ ಎನ್‍ಆರ್‍ಐ/ಎನ್‍ಆರ್‍ಐ ಪ್ರಾಯೋಜಿತ) ಮೂಲಕ ಪ್ರವೇಶ ಪಡೆಯುವ ಪದವಿ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಹಾಸ್ಟೆಲ್ ಇದೆ. ಸುಸಜ್ಜಿತ ಕೊಠಡಿ, ರೆಫ್ರಿಜರೇಟರ್, ಅಡುಗೆ ಮಾಡುವ ಸ್ಥಳ, ವಾಷಿಂಗ್ ಮೆಷಿನ್, ಕುಡಿಯಲು ಆರ್‍ಒ ನೀರು ಮತ್ತು ಅನಿಯಮಿತ ಅಂತರ್ಜಾಲ ಸೌಲಭ್ಯಗಳಿವೆ.

ಕಲ್ಪವೃಕ್ಷ ಬಾಲಕಿಯರ ವಿದ್ಯಾರ್ಥಿನಿನಿಲಯ

ಈ ನಿಲಯವು ಪಶುವೈದ್ಯಕೀಯ ಕಾಲೇಜು ಮತ್ತು ಡೈರಿ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯವನ್ನು ಒದಗಿಸುತ್ತದೆ. ಅಲ್ಲದೆ, ಬೆಂಗಳೂರಿನ ಪಶುವೈದ್ಯಕೀಯ ಕಾಲೇಜು ಮತ್ತು ಕೃಷಿ ವಿಶ್ವವಿದ್ಯಾಲಯದ ಕೆಲವು ಹಳೆಯ ವಿದ್ಯಾರ್ಥಿನಿಯರು ಹಂಗಾಮಿ ಶಿಕ್ಷಕರು, ಸಂಶೋಧಕರಾಗಿದ್ದಲ್ಲಿ ‘ಕೆಲಸ ಮಾಡುವ ಮಹಿಳೆಯರ ಸೌಲಭ್ಯದಡಿ’ ಕೊಠಡಿಗಳ ಲಭ್ಯತೆಗೆ ಅನುಗುಣವಾಗಿ ಹಾಸ್ಟೆಲ್‌ನಲ್ಲಿ ಅತಿಥಿಗಳಾಗಿ ಉಳಿದುಕೊಳ್ಳುವ ಅವಕಾಶವಿದೆ. ಒಟ್ಟು 128 ಕೊಠಡಿಗಳಿವೆ.

ಹಾಸ್ಟೆಲ್ ಒಳಗೆ ಮತ್ತು ಹೊರಗೆ ಸಿಸಿಟಿವಿ ವ್ಯವಸ್ಥೆ, 24 ಗಂಟೆಗಳ ಭದ್ರತಾ ವ್ಯವಸ್ಥೆ, ಕುಡಿಯಲು ಫಿಲ್ಟರ್, ಬಿಸಿ ಮತ್ತು ತಂಪು ನೀರಿನ ವ್ಯವಸ್ಥೆ, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ, ಇಂಟರ್ನೆಟ್ / ವೈ-ಫೈ ಸೌಲಭ್ಯಗಳು ವ್ಯವಸ್ಥೆ, ಒಳಾಂಗಣ ಆಟಗಳು, ಬ್ಯೂಟಿ ಪಾರ್ಲರ್, ಭೇಟಿ ನೀಡುವ ಪೋಷಕರು/ಸಹೋದರಿಯರಿಗಾಗಿ ಸಂದರ್ಶಕರ ಕೊಠಡಿ, ಟಿವಿ ಕೊಠಡಿ, ಪೋಷಕರಿಗೆ ಅತಿಥಿ ಗೃಹದಂತಹ ಸೌಲಭ್ಯಗಳಿವೆ.

ಆರೋಗ್ಯ ಕೇಂದ್ರ ಘಟಕ

ಆರೋಗ್ಯ ಕೇಂದ್ರವು ಅಕ್ಟೋಬರ್ 05, 2006 ರಿಂದ ಕಾರ್ಯನಿರ್ವಹಿಸುತ್ತಿದೆ. ಬೆಳಿಗ್ಗೆ 8:30 ರಿಂದ ಸಂಜೆ 4 ರವರೆಗೆ ತೆರೆದಿರುತ್ತದೆ. ಪಶುವೈದ್ಯಕೀಯ ಕಾಲೇಜು, ಹೈನುಗಾರಿಕೆ ಕಾಲೇಜು, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಮತ್ತು ಮೀನುಗಾರಿಕಾ ಸಂಶೋಧನಾ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಿನನಿತ್ಯದ ಪ್ರಕರಣಗಳ ರೋಗನಿರ್ಣಯ ಮತ್ತು ಚಿಕಿತ್ಸೆ, ಸಣ್ಣ ಶಸ್ತ್ರಚಿಕಿತ್ಸೆಗಳು, ವೈದ್ಯಕೀಯ ತುರ್ತುಸ್ಥಿತಿಗಳ ಚಿಕಿತ್ಸೆ ಮತ್ತು ರೇಬೀಸ್ ಚುಚ್ಚುಮದ್ದು ನೀಡುವಿಕೆಯು ಇಲ್ಲಿ ಲಭ್ಯ.

ಆವರಣದ ಕ್ಯಾಂಟೀನ್

ಹೆಬ್ಬಾಳ ಆವರಣದಲ್ಲಿ ಖಾಸಗಿ ಕ್ಯಾಂಟೀನ್ ಸೌಲಭ್ಯವಿದೆ. ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಟೆಂಡರ್ ಆಧಾರದ ಮೇಲೆ ಕ್ಯಾಂಟೀನ್ ಅನ್ನು ಕ್ಯಾಂಪಸ್ ಮುಖ್ಯಸ್ಥರ ನಿಯಂತ್ರಣದಲ್ಲಿ ನಡೆಸಲಾಗುತ್ತಿದೆ.