ಹೈನು ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು
ಹೈನು ತಂತ್ರಜ್ಞಾನದ ಶಿಕ್ಷಣಕ್ಕಾಗಿ ದೇಶದ ಪ್ರಮುಖ ಹಾಗೂ ಬಹುಬೇಡಿಕೆಯ ಸಂಸ್ಥೆಗಳಲ್ಲಿ ಹೈನು ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು ಸಹ ಒಂದಾಗಿದೆ. ಮಹಾವಿದ್ಯಾಲಯವನ್ನು 1980ರಲ್ಲಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಇದರ ವ್ಯಾಪ್ತಿಯಲ್ಲಿ ಸ್ಥಾಪಿಸಲಾಯಿತು. ಏಪ್ರಿಲ್ 2005ರಿಂದ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಅಡಿಯಲ್ಲಿ ಮಹಾವಿದ್ಯಾಲಯವು ಕಾರ್ಯನಿರ್ವಹಿಸುತ್ತಿದೆ.
ಈಗಾಗಲೇ ಈ ಸಂಸ್ಥೆಯಿಂದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಕಳೆದ 40 ವರ್ಷಗಳಲ್ಲಿ, ಹೈನು ವಿಜ್ಞಾನ ಮಹಾವಿದ್ಯಾಲಯವು ಗುಣಮಟ್ಟದ ಹೈನುಗಾರಿಕೆ ಮತ್ತು ಆಹಾರ ಉದ್ಯಮಗಳ ಅಗತ್ಯವನ್ನು ಪೂರೈಸಲು ಉತ್ತಮ ಮಾನವ ಸಂಪನ್ಮೂಲವನ್ನು ಸೃಷ್ಟಿಸಿದೆ. ಕರ್ನಾಟಕ ಹಾಲು ಒಕ್ಕೂಟದಲ್ಲಿ ಈ ಸಂಸ್ಥೆಯ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.