ಪಶು ಶರೀರಕ್ರಿಯಾ ವಿಜ್ಞಾನ ವಿಭಾಗ
ಪಶು ಶರೀರಕ್ರಿಯಾ ವಿಜ್ಞಾನ ವಿಭಾಗವು 1958 ರಲ್ಲಿ ಆರಂಭವಾಯಿತು. ಸ್ಥಾಪಕ ಶಿಕ್ಷಕರು ಮತ್ತು ವಿಭಾಗದ ಮುಖ್ಯಸ್ಥರಾಗಿ ಪ್ರೊ. ರವಿವರ್ಮ ಹೆಗಡೆಯವರು ನಿಯುಕ್ತರಾದರು. 1969ರಲ್ಲಿ ಮಾಸ್ಟರ್ಸ್ ಪದವಿ ಮತ್ತು 1999 ರಲ್ಲಿ ಡಾಕ್ಟರಲ್ ಪದವಿಯನ್ನು ಪ್ರಾರಂಭಿಸಲಾಯಿತು. ಇಲ್ಲಿಯವರೆಗೆ 45 ಅಭ್ಯರ್ಥಿಗಳು ಮಾಸ್ಟರ್ಸ್ ಪದವಿಯನ್ನು ಮತ್ತು 09 ಅಭ್ಯರ್ಥಿಗಳು ಡಾಕ್ಟರಲ್ ಪದವಿಯನ್ನು ಪಡೆದಿದ್ದಾರೆ. ವಿಭಾಗದ ಮುಖ್ಯಸ್ಥರಾಗಿ ಪ್ರೊ. ರವಿವರ್ಮ ಹೆಗಡೆ, ಪ್ರೊ. ಕೆ. ತಿಮ್ಮಯ್ಯ, ಪ್ರೊ. ಆರ್. ನರೇಂದ್ರನಾಥ್, ಪ್ರೊ. ಜಯಪ್ರಕಾಶ್, ಡಾ. ಜೆ. ಪಿ. ರವೀಂದ್ರ, ಡಾ. ವಿ. ಗಿರೀಶ್ ಕುಮಾರ್ ಮತ್ತು ಡಾ. ಟಿ. ವೀಣಾ ಸೇವೆ ಸಲ್ಲಿಸಿದ್ದಾರೆ. ಪ್ರೊ. ಎಂ. ನಾರಾಯಣ ಸ್ವಾಮಿ ಅವರು 2007 ರಿಂದ ಇಲ್ಲಿಯವರೆಗೆ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಡಾ. ಜೆ. ಪಿ. ರವೀಂದ್ರ ಅವರು ‘ಎಮ್ಮೆಗಳ ಅಂಡಾಶಯ ಗುಳ್ಳೆಗಳ ಬೆಳವಣಿಗೆ’ ಎಂಬ ಭಾರತೀಯ ಕೃಷಿ ಅನುಸಂದಾನ ಪರಿಷತ್ತಿನ ಪ್ರಾಯೋಜನೆಯ ಪ್ರಧಾನ ಸಂಶೋಧಕರಾಗಿ ಕಾರ್ಯನಿರ್ವಹಿಸಿದರು. ಪ್ರೊ. ಎಂ. ನಾರಾಯಣ ಸ್ವಾಮಿಯವರು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ‘ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ನಿಧಿ’ ಕೊಡುಗೆಯ ಪ್ರಾಯೋಜನೆಯಲ್ಲಿ ಸಹಭಾಗಿಯಾಗಿದ್ದರು. ವಿಭಾಗವು ಸ್ನಾತಕೋತ್ತರ ಸಂಶೋಧನೆಯಲ್ಲಿ ದೇಸಿ ಜಾನುವಾರುಗಳಾದ ಹಳ್ಳಿಕಾರ್, ಅಮೃತ್ ಮಹಲ್, ಮಲೆನಾಡು ಗಿಡ್ಡಾ ದನದ ತಳಿಗಳು, ಮಂಡ್ಯ ಕುರಿ, ದೇಸಿ ಮೇಕೆ, ಅಂಕಾಮಲಿ ಹಂದಿ ತಳಿಗಳಲ್ಲಿ ಶಾರೀರಿಕ ವಿಜ್ಞಾನದ ಕೆಲ ಮಹತ್ತರವಾದ ಅಧ್ಯಯನಗಳನ್ನು ಮಾಡಿದೆ. ಬ್ರಾಯ್ಲರ್ ಕೋಳಿ ಸಾಕಾಣಿಕೆಯಲ್ಲಿ ಸಹಜೈವಿಕಗಳು, ಪೂರಕ ಜೈವಿಕಗಳು, ನ್ಯಾನೋ ಸೆಲೇನಿಯಂ ಮತ್ತು ನ್ಯಾನೋ ಕರ್ಕುಮಿನ್ ವಸ್ತುಗಳ ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ.
ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರವಿವರ್ಮ ಹೆಗಡೆ, ಪ್ರೊ. ಕೆ. ತಿಮ್ಮಯ್ಯ ಮತ್ತು ಪ್ರೊ. ಎಂ. ನಾರಾಯಣ ಸ್ವಾಮಿ ಅವರು ಕನ್ನಡದ ವಿಜ್ಞಾನ ಬರಹಗಾರರಾಗಿ ಹಲವು ಪುಸ್ತಕಗಳನ್ನು ಪ್ರಕಟಿಸಿದರು. ಪ್ರೊ. ಎಂ. ನಾರಾಯಣ ಸ್ವಾಮಿಯವರ ಮಾರ್ಗದರ್ಶನದ ಡಾಕ್ಟರಲ್ ಸ್ಕಾಲರ್ಗಳಾದ ಡಾ. ಕೆ. ಹೇಮಂತ್ ಗೌಡರವರು ಮತ್ತು ಡಾ. ಎಚ್. ಎಸ್. ಶ್ವೇತಾ ಅವರು ತಮ್ಮ ಅಧ್ಯಯನಕ್ಕೆ ಕ್ರಮವಾಗಿ ಪ್ರತಿಷ್ಟಿತ ಭಾರತ ಸರ್ಕಾರದ ಇನ್ಸ್ಪೈರ್ ಮತ್ತು ರಾಜ್ಯ ಸರ್ಕಾರದ ಡಿಎಸ್ಟಿ - ಪಿಎಚ್ಡಿ ಶಿಷ್ಯವೇತನ ಪಡೆದರು. ಹೆಚ್ಚಿನ ಸಂಖ್ಯೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಪರೀಕ್ಷೆ ಮತ್ತು ಸೀನಿಯರ್ ರೀಸರ್ಚ್ ಫೆಲೋ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರು.
ರಕ್ತ ಪರೀಕ್ಷೆ ಮತ್ತು ರಕ್ತಸಾರದ ಜೀವರಾಸಾಯನಿಕ ವಸ್ತುಗಳ ಪರೀಕ್ಷೆಯ ಸೌಲಭ್ಯಗಳನ್ನು ಇತರೆ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿದೆ. ಪ್ರಾಚೀನ ಈಜಿಪ್ಟಿನಲ್ಲಿ ಬಳಕೆಯಲ್ಲಿದ್ದ ಮಹಿಳಾ ಗರ್ಭ ತಪಾಸಣಾ ವಿಧಾನವನ್ನು ಹೈನುರಾಸುಗಳಿಗೆ ವಿಸ್ತರಿಸಿ, ಉತ್ತಮ ಫಲಿತಾಂಶ ಪಡೆದು ‘ಪುಣ್ಯಕೋಟಿ ಪರೀಕ್ಷೆ’ ಎಂದು ಹೆಸರಿಸಲಾಗಿದೆ. ಕರ್ನಾಟಕ ಪಶುವೈದ್ಯಕೀಯ ಪರಿಷತ್ತು ಆಯೋಜಿಸುತ್ತಿರುವ ತರಬೇತಿ ಕಾರ್ಯಕ್ರಮಗಳಲ್ಲಿ ವಿಭಾಗದ ಸಿಬ್ಬಂದಿಯು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ.