+91-8482-245241 regkvafsu@gmail.com

ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು

ಮೀನುಗಾರಿಕಾ ಮಹಾವಿದ್ಯಾಲಯವನ್ನು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ಆಧೀನದಲ್ಲಿ 1969ರಲ್ಲಿ ಸ್ಥಾಪಿಸಲಾಯಿತು. ಈ ಮೀನುಗಾರಿಕಾ ಮಹಾವಿದ್ಯಾಲಯವು, ನಮ್ಮ ದೇಶದಲ್ಲಿ ಸ್ಥಾಪಿಸಲಾದ ಪ್ರಪ್ರಥಮ ಮೀನುಗಾರಿಕಾ ಮಹಾವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾವಿದ್ಯಾಲಯವು 2005ರಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ಅಂಗಸಂಸ್ಥೆಯಾಗಿದೆ.

ಮೀನುಗಾರಿಕೆ ಕ್ಷೇತ್ರಗಳಿಗೆ ಸಂಬಂಧಿಸಿದ ಜೈವಿಕ, ತಾಂತ್ರಿಕ ಮತ್ತು ಆರ್ಥಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಹೆಚ್ಚಿನ ತಿಳುವಳಿಕೆ ಮತ್ತು ಉದ್ಯಮವನ್ನು ಉತ್ತೇಜಿಸುವುದು ಮಹಾವಿದ್ಯಾಲಯದ ಧ್ಯೇಯವಾಗಿದೆ. ಮೀನುಗಾರಿಕಾ ವಿಜ್ಞಾನದಲ್ಲಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಗೆ ಯೋಜನೆಗಳನ್ನು ರಚಿಸುವುದು, ಯೋಜನೆಗಳನ್ನು ಕೈಗೊಳ್ಳುವುದು, ಸಹಾಯ ಮಾಡುವುದು, ಉತ್ತೇಜಿಸುವುದು ಮತ್ತು ಸಂಯೋಜಿಸುವುದು ಕಾಲೇಜಿನ ಜವಾಬ್ದಾರಿಯಾಗಿದೆ. ಪ್ರಮುಖ ಮೀನುಗಾರಿಕಾ ಸಂಸ್ಥೆಯಾಗಿರುವ ಈ ಕಾಲೇಜು ದೇಶದಲ್ಲಿ ಮೀನುಗಾರಿಕೆ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಮಹಾವಿದ್ಯಾಲಯದಲ್ಲಿ ಮೀನುಗಾರಿಕೆ ವಿಜ್ಞಾನದಲ್ಲಿ ಬಿ.ಎಫ್.ಎಸ್ಸಿ. (4 ವರ್ಷ), ಎಂ.ಎಫ್.ಎಸ್ಸಿ. (2 ವರ್ಷ) ಮತ್ತು ಪಿಎಚ್.ಡಿ. (3 ವರ್ಷ) ಕೋರ್ಸುಗಳ ವ್ಯಾಸಂಗವಿದೆ. ಜಲಚರಗಳ ಸಾಕಣೆ, ಮೀನುಗಾರಿಕೆ ಸೂಕ್ಷ್ಮಾಣು ಜೀವಶಾಸ್ತ್ರ, ಮೀನು ಸಂಸ್ಕರಣಾ ತಂತ್ರಜ್ಞಾನ, ಮೀನುಗಾರಿಕೆ ಸಂಪನ್ಮೂಲಗಳು ಮತ್ತು ನಿರ್ವಹಣೆ, ಮೀನುಗಾರಿಕೆ ಪರಿಸರ ಮತ್ತು ಪರಿಸರ ವಿಜ್ಞಾನ ಮತ್ತು ಮೀನುಗಾರಿಕೆ ಎಂಜಿನಿಯರಿಂಗ್ ತಂತ್ರಜ್ಞಾನ ಎಂಬ ಐದು ವಿಭಾಗಗಳಲ್ಲಿ ಎಂ.ಎಫ್.ಎಸ್ಸಿ. ಮತ್ತು ಪಿಎಚ್.ಡಿ. ಪದವಿಗಳಿಗಾಗಿ ಅಧ್ಯಯನ ನಡೆಸಲಾಗುತ್ತಿದೆ.

ಕಾಲೇಜು ಎರಡು ಆವರಣಗಳನ್ನು ಹೊಂದಿದ್ದು, ಮುಖ್ಯ ಆವರಣವು ಎಕ್ಕೂರು, ಕಂಕನಾಡಿ, ಮಂಗಳೂರಿನಲ್ಲಿದೆ. ಇಲ್ಲಿ ಆಡಳಿತಾತ್ಮಕ ವಿಭಾಗ, ಗ್ರಂಥಾಲಯ, ಜಲಚರ ಸಾಕಣೆ ವಿಭಾಗ, ಮೀನುಗಾರಿಕಾ ಸೂಕ್ಷ್ಮಜೀವಾಣು ವಿಜ್ಞಾನ ವಿಭಾಗ, ಮೀನುಗಾರಿಕೆ ಸಂಪನ್ಮೂಲ ಮತ್ತು ವಿರ್ವಹಣೆ ವಿಭಾಗ, ಜಲ ಪರಿಸರ ನಿರ್ವಹಣೆ ವಿಭಾಗ, ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್‍ಗಳು, ಅತಿಥಿ ಗೃಹ, ಸಭಾಂಗಣ, ಕ್ರೀಡಾಂಗಣ ಮತ್ತು ಈಜುಕೊಳ ಇದೆ. ಇನ್ನೊಂದು ಆವರಣವು ರಾಷ್ಟ್ರೀಯ ಹೆದ್ದಾರಿ 66 ಮತ್ತು ಅರೇಬಿಯನ್ ಸಮುದ್ರಕ್ಕೆ ಹತ್ತಿರವಿರುವ ನೇತ್ರಾವತಿ ನದಿಯ ಮುಖಜದ ಬಳಿ ಹೊಯ್ಗೆ ಬಜಾರ್‍ನಲ್ಲಿ ಇದೆ. ಈ ಆವರಣದಲ್ಲಿ ಮೀನು ಸಂಸ್ಕರಣಾ ತಂತ್ರಜ್ಞಾನ ವಿಭಾಗ ಮತ್ತು ಮೀನುಗಾರಿಕೆ ಎಂಜಿನಿಯರಿಂಗ್ ತಂತ್ರಜ್ಞಾನ ವಿಭಾಗಗಳಿವೆ.

ಪ್ರಮುಖ ಶಿಕ್ಷಣ ಸಂಸ್ಥೆಯಾಗಿ, ಮೀನುಗಾರಿಕಾ ಮಹಾವಿದ್ಯಾಲಯವು ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಿರ್ವಹಿಸಲು ಭೌತಿಕ, ಆಡಳಿತಾತ್ಮಕ, ಪಠ್ಯಕ್ರಮದ ಮೂಲಸೌಕರ್ಯಗಳನ್ನು ಒದಗಿಸುತ್ತ್ತಿದೆ. ಮಹಾವಿದ್ಯಾಲಯವು ಮೀನುಗಾರಿಕೆ ವಿಜ್ಞಾನ, ಮೂಲ ವಿಜ್ಞಾನ ಮತ್ತು ಗಡಿನಾಡಿನ ವಿವಿಧ ಶಾಖೆಗಳಲ್ಲಿ ಪರಿಣಿತಿ ಪಡೆದ 35 ಬೋಧಕ ಸಿಬ್ಬಂದಿಗಳನ್ನು ಒಳಗೊಂಡಿದೆ. ಅನೇಕ ಬೋಧಕರು ತಮ್ಮ ಉನ್ನತ ಶಿಕ್ಷಣ ಮತ್ತು ತರಬೇತಿಯನ್ನು ಭಾರತ ಮತ್ತು ವಿದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪಡೆದಿದ್ದಾರೆ.

ಮಹಾವಿದ್ಯಾಲಯವು ಸುಧಾರಿತ ವೈಜ್ಞಾನಿಕ ಪ್ರಯೋಗಾಲಯಗಳನ್ನು ಹೊಂದಿದೆ. ಸೂಕ್ಷ್ಮಜೀವಿಯ ಸಂಪನ್ಮೂಲ ಕೇಂದ್ರವು ಯುನೆಸ್ಕೋದಿಂದ ಮಾನ್ಯತೆ ಪಡೆದಿದೆ. ರೋಗಪತ್ತೆ ಕೇಂದ್ರ, ರೋಗ ಚಿಕಿತ್ಸಾ ಕೇಂದ್ರ, ಪೌಷ್ಠಿಕಾಂಶ ಮತ್ತು ಹಿಸ್ಟೋಪೆಥಾಲಜಿ, ಬಯೋಇನ್ಫಮ್ರ್ಯಾಟಿಕ್ಸ್, ಮೀನುಗಾರಿಕೆ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್, ಪರಿಸರ ಮಾಲಿನ್ಯ ಮೇಲ್ವಿಚಾರಣೆ ಮತ್ತು ಪರಿಸರ ವ್ಯವಸ್ಥೆ ಅಧ್ಯಯನ, ಭೂ ಪ್ರಾದೇಶಿಕ ಜಲವಿಜ್ಞಾನ ಮತ್ತು ದೂರ ಸಂವೇದನೆ ಕ್ಷೇತ್ರಗಳಲ್ಲಿ ವಿವಿಧ ಸಂಶೋಧನೆ ಮತ್ತು ಸಲಹಾ ಯೋಜನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾದ ಅನುಭವೀ ಪ್ರಾಧ್ಯಾಪಕರನ್ನು ಹೊಂದಿದೆ. ಮಹಾವಿದ್ಯಾಲಯವು ಬಾಹ್ಯ ಧನ ಸಹಾಯ ಏಜೆನ್ಸಿಗಳ ಮೂಲಕ ಸಂಶೋಧನೆ ಮತ್ತು ವಿಸ್ತರಣೆಗೆ ಹಣವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಮತ್ತು 2016-17ನೇ ಸಾಲಿನಿಂದ 394.12 ಲಕ್ಷ ರೂ. ಗಳ ಮೌಲ್ಯದ 20 ಸಂಶೋಧನಾ ಯೋಜನೆಗಳು ಚಾಲ್ತಿಯಲ್ಲಿವೆ.