+91-8482-245241 regkvafsu@gmail.com

ನಮ್ಮ ಕುರಿತು

ಕಪಪಮೀವಿವಿಯ ಉಗಮ

ಪಶುಪಾಲನೆ, ಹೈನುಗಾರಿಕೆ ಮತ್ತು ಮೀನು ಸಾಕಾಣಿಕೆಯಂತಹ ರೈತೋದ್ಯಮಗಳ ಪ್ರಧಾನ ಅಭಿವೃದ್ಧಿಗಾಗಿ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಫೆಬ್ರವರಿ 23, 2004ರಲ್ಲಿ ಪ್ರಕಟಗೊಂಡ ಕರ್ನಾಟಕ ಕಾಯ್ದೆ ಸಂಖ್ಯೆ 9, 2004 ರಂತೆ ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯವು ಏಪ್ರಿಲ್ 1, 2005ರಿಂದ ಕಾರ್ಯಾರಂಭ ಮಾಡಿದೆ. ಕರ್ನಾಟಕದಲ್ಲಿನ ಪಶುವೈದ್ಯಕೀಯ, ಪಶುವಿಜ್ಞಾನ, ಹೈನುಗಾರಿಕೆ ಮತ್ತು ಮತ್ಸ್ಯ ವಿಜ್ಞಾನಗಳಲ್ಲಿನ ಶಿಕ್ಷಣ, ಕಲಿಕೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿಯ ಧ್ಯೇಯವನ್ನೊಳಗೊಂಡ ತಂತ್ರಜ್ಞಾನಗಳನ್ನು ಹಳ್ಳಿಗಳಿಗೆ ವರ್ಗಾಯಿಸುವ ಜವಾಬ್ದಾರಿಯೊಂದಿಗೆ ಸ್ಥಾಪಿಸಲಾಗಿದೆ.

ರೈತಾಪಿ ಜನರ ಅಭ್ಯುದಯವೇ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವೆಂಬುದನ್ನು ಸಾರಿ ಹೇಳುವ ‘ಗ್ರಾಮ್ಯಮುಖಿ – ರೈತಸ್ನೇಹಿ’ ಎಂಬ ಧ್ಯೇಯವಾಕ್ಯವನ್ನು ವಿಶ್ವವಿದ್ಯಾಲಯವು ಹೊಂದಿದೆ. ಪ್ರೊ.. ಆರ್. ಎನ್. ಶ್ರೀನಿವಾಸಗೌಡರವರನ್ನು ಮೊಟ್ಟಮೊದಲ ಕುಲಪತಿಗಳಾಗಿ ನೇಮಿಸಲಾಯಿತು. ಇವರು ಸೆಪ್ಟಂಬರ್ 2004ರಿಂದ 9 ಫೆಬ್ರವರಿ 2008ರವರೆಗೆ ಕಾರ್ಯ ನಿರ್ವಹಿಸಿದರು. ತದನಂತರ ಪ್ರೊ. ಜಿ. ಎಸ್. ಭಟ್ ಮತ್ತು ಡಾ. ಎಸ್. ಮಲ್ಲಿಕಾರ್ಜುನಪ್ಪರವರು ಫೆಬ್ರವರಿ 10, 2008 ರಿಂದ ಜುಲೈ 24, 2008 ರವರೆಗೆ ಪ್ರಭಾರಿ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದರು. ಪ್ರೊ. ಸುರೇಶ್ ಹೊನ್ನಪ್ಪಗೋಳ್‍ರವರು 2008 ರಿಂದ 2012 ರವರೆಗೆ ಎರಡನೇ ಅವಧಿಯ ಪೂರ್ಣಾವಧಿ ಕುಲಪತಿಗಳಾಗಿದ್ದರು. ಮೂರನೆಯ ಅವಧಿಯ ಕುಲಪತಿಗಳಾಗಿ ಡಾ. ಸಿ. ರೇಣುಕಾಪ್ರಸಾದ್ 2012 ರಿಂದ 2016ರವರೆಗಿದ್ದರು. ಡಾ. ಆರ್.ವಿ. ಪ್ರಸಾದ್‍ರವರು 2016 ರಿಂದ ಫೆಬ್ರವರಿ 2018ರವರೆಗೆ ಪ್ರಭಾರಿ ಕುಲಪತಿಗಳಾಗಿದ್ದರು. ಪ್ರೊ. ಎಚ್. ಡಿ. ನಾರಾಯಣಸ್ವಾಮಿಯವರು ಕುಲಪತಿಗಳಾಗಿ ಫೆಬ್ರವರಿ 2018 ರಿಂದ ಫೆಬ್ರವರಿ 2022 ರವರೆಗೆ ಕಾರ್ಯನಿರ್ವಹಿಸಿದರು. ತದನಂತರ ಪ್ರೊ. ಕೆ. ಸಿ. ವೀರಣ್ಣನವರು ಕುಲಪತಿಗಳಾಗಿದ್ದಾರೆ.
ಕಪಪಮೀವಿವಿ ಒಂದು ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿದೆ. ಕರ್ನಾಟಕ ಸರ್ಕಾರದಿಂದ ರೂಪುಗೊಂಡ ಕಾಯ್ದೆ ಮತ್ತು ನಿಯಮಗಳ ಅನ್ವಯ ಕಾರ್ಯನಿರ್ವಹಿಸುವ ವ್ಯವಸ್ಥಾಪನಾ ಮಂಡಳಿಯಿದೆ. ವಿಶ್ವವಿದ್ಯಾಲಯವು ಆಡಳಿತಾತ್ಮಕವಾಗಿ ಕಾರ್ಯನಿರ್ವಹಿಸಲು ಹಣಕಾಸು ಸಮಿತಿಯ ಸಹಕಾರವನ್ನು ಪಡೆದಿರುತ್ತದೆ. ಶೈಕ್ಷಣಿಕ ವಿಷಯಗಳ ಮೇಲ್ವಿಚಾರಣೆ ಮಾಡಲು ವಿವಿಧ ನಿಕಾಯಗಳ ಅಧ್ಯಯನ ಮಂಡಳಿ ಮತ್ತು ವಿದ್ಯಾ ವಿಷಯಕ ಪರಿಷತ್ತನ್ನು ಒಳಗೊಂಡಿರುತ್ತದೆ. ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಉಸ್ತುವಾರಿಗಾಗಿ ಕ್ರಮವಾಗಿ ಸಂಶೋಧನಾ ಪರಿಷತ್ತು ಮತ್ತು ವಿಸ್ತರಣಾ ಶಿಕ್ಷಣ ಪರಿಷತ್ತುಗಳಿವೆ.

ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳು

  • ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳಲ್ಲಿ ಅತ್ಯುತ್ತಮ ಗುಣಮಟ್ಟದ ವೃತ್ತಿಪರ ಉನ್ನತ ಶಿಕ್ಷಣವನ್ನು ನೀಡುವುದು.
  • ಉನ್ನತ ಮಟ್ಟದ ಕಲಿಕೆಯನ್ನು ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳಲ್ಲಿ ಸಂಶೋಧನೆ ಮಾಡುವ ಮೂಲಕ ಕಲ್ಪಿಸುವುದು.
  • ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳಲ್ಲಿ ವಿಸ್ತರಣಾ ಶಿಕ್ಷಣವನ್ನು ಕೈಗೊಂಡು ಗ್ರಾಮೀಣಾಭಿವೃದ್ಧಿಯ ಧ್ಯೇಯವನ್ನೊಳಗೊಂಡ ತಂತ್ರಜ್ಞಾನಗಳನ್ನು ಸರ್ಕಾರದ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಹಳ್ಳಿಗಳ ರೈತರಿಗೆ ವರ್ಗಾಯಿಸುವುದು.
  • ಕಾಲಕಾಲಕ್ಕೆ ರಾಜ್ಯ ಸರ್ಕಾರವು ಸೂಚಿಸುವ ಇನ್ನಿತರೆ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವುದು.

ವಿಶ್ವವಿದ್ಯಾಲಯದ ಮುಖ್ಯ ಗುರಿ

ವಿಶ್ವವಿದ್ಯಾಲಯದ ಮುಖ್ಯ ಗುರಿಯು ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನ ಮತ್ತು ಸಂಬಂಧಿಸಿದ ವಿಷಯಗಳಲ್ಲಿ ನೀಡಬಹುದಾದ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣದ ಸೇವೆಯ ಮುಂದಾಳತ್ವ ವಹಿಸುವ ನಿಟ್ಟಿನಲ್ಲಿ ಶ್ರಮಿಸುವುದು.
ವಿಜ್ಞಾನದ ಅಸೀಮ ಜ್ಞಾನ ಮತ್ತು ಸಮಕಾಲೀನ ಅಭಿವೃದ್ಧಿಯೊಂದಿಗೆ ಹೆಜ್ಜೆಹಾಕುವುದು. ಸಾಮಾಜಿಕವಾಗಿ ಮತ್ತು ತಾಂತ್ರಿಕವಾಗಿ ಸಮಂಜಸವಾದ ಕ್ರಿಯಾಶೀಲ ಪ್ರಯತ್ನಗಳಲ್ಲಿ ತೊಡಗುವುದು. ಈ ದಿಸೆಯಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರಾಮಾಣಿಕ ಬದ್ದತೆಯನ್ನು ಹೊಂದಿದೆ. ಆಧುನಿಕ ಅರಿವಿನ ಮಾದರಿಗಳನ್ನು ಮತ್ತು ಸಮಕಾಲೀನ ಅಭಿವೃದ್ಧಿಗಳನ್ನು ಅಳವಡಿಸಿಕೊಂಡು ಮಾನವ ಸಂಪನ್ಮೂಲವನ್ನು ಸಿದ್ದಪಡಿಸಿ ನವೀನ ತಾಂತ್ರಿಕತೆಯನ್ನು ಸೂಕ್ತವಾಗಿ ಪಸರಿಸಲು ಕಾರ್ಯನಿರ್ವಹಿಸುತ್ತಾ ರಾಜ್ಯ ಮತ್ತು ದೇಶದ ಪಶುಪಾಲಕರ ಮತ್ತು ಮತ್ಸ್ಯಕೃಷಿಕರ ಸೇವೆಗಾಗಿ ಮುಂಚೂಣಿಯಲ್ಲಿರಲು ಬದ್ದವಾಗಿದೆ.